ಓಲೆಮರ: ಪಾಮೇಸೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ಕಾರಿಫ ಜಾತಿಯ ವೃಕ್ಷ. ಇದರಲ್ಲಿ ಸು. 20 ಪ್ರಭೇದಗಳಿವೆ. ಇವುಗಳಲ್ಲಿ ಕಾರಿಫ ಟಾಲಿಯೇರ ಮತ್ತು ಕಾ.ಅಂಬ್ರ್ಯಾಕ್ಯುಲಿಫೆರ ಪ್ರಭೇದಗಳು ಮುಖ್ಯವಾದುವು. ಇವಕ್ಕೆ ಶ್ರೀತಾಲ, ತಾಲ, ತಾರ, ತಾಡಪತ್ರ ಮುಂತಾದ ಇತರ ಸಾಮಾನ್ಯ ಹೆಸರುಗಳೂ ಉಂಟು. ಏಷ್ಯದ ಉಷ್ಣಪ್ರದೇಶಗಳಲ್ಲೆಲ್ಲ ಇದು ವ್ಯಾಪಿಸಿದೆ. ದಕ್ಷಿಣ ಭಾರತ, ಮಲಯ, ಅಂಡಮಾನ್ ದ್ವೀಪಗಳು ಮುಂತಾದೆಡೆಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಶ್ರೀಲಂಕ, ಮಯನ್ಮಾರ್ಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುದಲ್ಲದೆ ಇದನ್ನು ನೆಟ್ಟು ಬೆಳೆಸುವುದೂ ಉಂಟು. ಉದ್ಯಾನ ಗಳಲ್ಲಿ ಅಲಂಕಾರ ಸಸ್ಯವಾಗಿ ಇದನ್ನು ಬೆಳೆಸಿರುವುದನ್ನು ಕಾಣಬಹುದು. ಬೆಳೆವಣಿಗೆ ಬಲು ನಿಧಾನ. ಸಸ್ಯ ತೆಂಗಿನಮರವನ್ನು ಹೋಲುತ್ತದೆ.  ತೆಂಗಿನಂತೆ ಸು. 60'-80' ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಕಂಬದಂತೆ ನೇರ, ಕವಲೊಡೆಯುವುದಿಲ್ಲ. ತುದಿಯಲ್ಲಿ ಗರಿಗಳ ಮಕುಟವಿದೆ. ಎಲೆಗಳು ಹಸ್ತಾಕಾರದಲ್ಲಿದ್ದು (ಪಾಮೇಟ್) ಅಗಲವಾಗಿ ಬೀಸಣಿಗೆಯಂತೆ ಕಾಣುತ್ತವೆ. ಒಂದೊಂದಕ್ಕೆ ತುಂಬ ಉದ್ದವಾದ 5'-10' ತೊಟ್ಟಿದೆ. ತೊಟ್ಟಿನ ಎರಡೂ ಅಂಚುಗಳಲ್ಲಿ ಮುಳ್ಳುಗಳಿರುವು ದೊಂದು ವೈಶಿಷ್ಟ್ಯ. ಎಲೆಯ ಅಲಗು 80-100 ವಿಭಾಗಗಳಾಗಿ ಸೀಳಿಕೊಂಡಿವೆ. ಕಾಂಡದ ತುದಿಯ ಸುತ್ತ ಹಸಿರು ಎಲೆಗಳ ಕೆಳಗೆ ಒಣಗಿದ ಗರಿಗಳು ತೂಗುಬಿದ್ದಿರುವು ದುಂಟು. ಪ್ರಭೇದಕ್ಕನುಗುಣವಾಗಿ ಮರಕ್ಕೆ 20-80 ವರ್ಷ ವಯಸ್ಸಾದಾಗ, ಕಾಂಡದ ತುಟ್ಟತುದಿ ಯಲ್ಲಿ ಹೂಗೊಂಚಲು ಮೂಡಲು ಆರಂಭವಾಗುತ್ತದೆ. ಹೂ ಬಿಡುವ ಮುನ್ನ ಗರಿಗಳೆಲ್ಲ ಉದುರಿಹೋಗುವುದೂ ಮರ ತನ್ನ ಜೀವಿತದಲ್ಲಿ ಒಮ್ಮೆ ಮಾತ್ರ ಹೂ ಬಿಡುವುದೂ ಇದರ ಸೋಜಿಗಗಳು. ಹೂಗೊಂಚಲು ತಾಳಗುಚ್ಛ (ಸ್ಪೇಡಿಕ್ಸ್‌) ಮಾದರಿಯದು, ಬೃಹದಾಕಾರದ (ಉದ್ದ 10'-20') ಇದು ವಿಪುಲವಾಗಿ ಕವಲೊಡೆದಿರುತ್ತದೆ. ಒಂದೊಂದು ಕವಲಿನಲ್ಲಿಯೂ ಹಲವಾರು ಕದಿರುಗೊಂಚಲುಗಳು (ಸ್ಪೈಕ್ಸ್‌) ಮತ್ತು ಅವುಗಳಲ್ಲಿ ಜೋಡಣೆಗೊಂಡಿರುವ ಅಸಂಖ್ಯಾತವಾದ ಪುಟ್ಟ ಹೂಗಳು ಇವೆ. ಹೂಗೊಂಚಲು ಹೊರಬಂದು ಸಂಪುರ್ಣವಾಗಿ ಅರಳಿದಾಗ ಮರ ತೇರಿನಂತೆ ಬಹು ಅಂದವಾಗಿ ಕಾಣುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ಇದಕ್ಕೆ ಕಾರಿಫ ಎಂದು ಹೆಸರು ಬಂದಿರುವುದು (ಗ್ರೀಕ್ ಭಾಷೆಯಲ್ಲಿ ಕಾರಿಫ ಎಂದರೆ ತುದಿ ಎಂದು ಅರ್ಥ). ಹೂವಿನ ರಚನೆ ಈ ರೀತಿ ಇದೆ; ಮೂರು ಮೂರರಂತೆ ಜೋಡಣೆಗೊಂಡಿರುವ ಆರು ಪೆರಯಾಂತುಗಳು. ಆರು ಕೇಸರಗಳು ಮತ್ತು ಮೂರು ಕಾರ್ಪೆಲ್ಲುಗಳನ್ನೊಳಗೊಂಡ ಉಚ್ಚಸ್ಥಾನದ ಅಂಡಾಶಯ. ಅಂಡಕೋಶದಲ್ಲಿ 3 ಕೋಣೆಗಳಿವೆ. ಒಂದೊಂದರಲ್ಲಿಯೂ ಒಂದೊಂದು ಅಂಡಕವಿದೆ. ಮೆದುವಾಗಿ ಗುಂಡಾಗಿರುವ ಹಣ್ಣಿನಲ್ಲಿ ಒಂದೇ ಬೀಜವಿರುತ್ತದೆ. ಈ ಮಾದರಿಯನ್ನು ಅಷ್ಟಿಫಲ (ಡ್ರೂಪ್) ಎನ್ನುತ್ತಾರೆ. ಬೀಜಗಳು ಬಲಿತಾದ ಮೇಲೆ ಮರ ಸತ್ತುಹೋಗುತ್ತದೆ.
ಓಲೆಮರ ತೆಂಗಿನಮರದಂತೆಯೇ ತುಂಬ ಉಪಯುಕ್ತವಾದುದು. ಇದರ ಎಲೆಗಳನ್ನು ಛಾವಣಿಗಳನ್ನು ಮುಚ್ಚಲೂ, ಬೀಸಣಿಗೆ, ಚಾಪೆ, ಕೊಡೆ, ಬುಟ್ಟಿ ಮುಂತಾದುವನ್ನು ಮಾಡಲೂ ಬಳಸುತ್ತಾರೆ. ಅಲ್ಲದೆ ಹಿಂದಿನ ಕಾಲದಲ್ಲಿ ಗರಿಗಳನ್ನು ಕತ್ತರಿಸಿ ಹದಗೊಳಿಸಿ ಬರೆವಣಿಗೆಗಾಗಿ ಉಪಯೋಗಿಸುತ್ತಿದ್ದರು (ನೋಡಿ- ಓಲೆ-ಗ್ರಂಥಗಳು). ಗರಿಗಳ ತೊಟ್ಟಿನಿಂದ ದೃಢವಾದ ಕಂದುಬಣ್ಣದ ಕಾಗದ ತಯಾರಿಸುತ್ತಾರೆ. ಕಾಂಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಷ್ಠವಿದೆ. ಅದನ್ನು ಹೊರತೆಗೆದು ಒಂದು ವಿಧದ ಅಕ್ಕಿಯನ್ನು (ಸ್ಯಾಗೊ) ತಯಾರಿಸುವುದುಂಟು. ಕಾಂಡದಿಂದ ನಾರನ್ನೂ ತೆಗೆಯಬಹುದು. ಕೆಲವು ಕಡೆ ಎಳೆಯ ಕಾಯಿಗಳನ್ನು ತಿನ್ನುವ ರೂಢಿಯಿದೆ. ಅವು ಹಣ್ಣಾಗಿ ಬಲಿಯುತ್ತ ಹೋದಂತೆ ಬೀಜಗಳು ವಿಷಪುರಿತವಾಗುತ್ತವೆ. ಇಂಥ ಬೀಜಗಳನ್ನು ಜಜ್ಜಿ ತಯಾರಿಸಿದ ಸರಿಯನ್ನು ಕೆರೆ, ನದಿಗಳಲ್ಲಿ ಕದಡಿದರೆ ಆ ನೀರು ಕುಡಿದ ಮೀನುಗಳು ನಿಶ್ಚೇತನಗೊಳ್ಳುತ್ತದೆ. ಮೀನುಗಳನ್ನು ಹಿಡಿಯಲು ಈ ವಿಧಾನವನ್ನನುಸರಿಸುತ್ತಾರೆ. ಬೀಜಗಳು ಗಟ್ಟಿಯಾಗಿ ಬಿಳಿಯ ಬಣ್ಣಕ್ಕಿರುತ್ತವೆ. ಇವುಗಳಿಂದ ಮಣಿಗಳನ್ನೂ ಗುಂಡಿಗಳನ್ನೂ ಮಾಡುತ್ತಾರೆ.

ಕಾರಿಫ ಜಾತಿಯ ಇನ್ನೊಂದು ಪ್ರಭೇದ ಕಾ.ಇಲೇಟ ಎಂಬುದು ಬರ್ಮ, ಜಾವ, ಅಂಡಮಾನ್ ದ್ವೀಪಗಳು ಮತ್ತು ಫಿಲಿಪೀನ್ಸ್‌ಗಳಲ್ಲಿ ಬೆಳೆಯುತ್ತದೆ. ಕಾ.ಟಾಲಿಯೇರ ಮತ್ತು ಕಾ.ಅಂಬ್ರಾಕ್ಯುಲಿಫೆರಗಳಂತೆಯೇ ಇರುವ ಇದೂ ಹಲವು ರೀತಿಯಿಂದ ಉಪಯುಕ್ತ. ಒರಟಾದ ಗರಿಗಳಿಂದ ಚಾಪೆ, ಹಾಯಿಪಟ ಮುಂತಾದುವನ್ನೂ ನಯವಾದ ಮತ್ತು ಉತ್ತಮವಾದ ಗರಿಗಳಿಂದ ಹ್ಯಾಟುಗಳನ್ನೂ ಬುಟ್ಟಿಗಳನ್ನೂ ಮಾಡುತ್ತಾರೆ. ಎಳೆಯ ಗರಿಗಳ ತೊಟ್ಟಿನಿಂದ ಪಡೆಯಬಹುದಾದ ನಾರನ್ನು ಬ್ಯಾಂಗ್ಕಾಕ್ ಹ್ಯಾಟ್ ಮಾಡುವುದಕ್ಕೂ ಒರಟು ಬಟ್ಟೆಯನ್ನು ನೇಯುವುದಕ್ಕೂ ಉಪಯೋಗಿಸುತ್ತಾರೆ. ಈ ಬಟ್ಟೆಯಿಂದ ಚೀಲಗಳು, ತೆರೆಗಳು ಮತ್ತು ಹೊದಿಕೆಗಳನ್ನು ತಯಾರಿಸಬಹುದು.
ಈ ಜಾತಿಯ ಸಸ್ಯಗಳನ್ನು ಬೀಜಗಳಿಂದ ವೃದ್ಧಿ ಮಾಡುತ್ತಾರೆ. ಜೌಗಿಲ್ಲದ ಫಲವತ್ತಾಗಿರುವ ಗೋಡುಮಣ್ಣಿನಲ್ಲಿ ಇವು ಚೆನ್ನಾಗಿ ಬೆಳೆಯುತ್ತವೆ.	(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ